ಶಿರಾ ನವಾಬರು
	17-18ನೆಯ ಶತಮಾನಗಳಲ್ಲಿ ಶಿರಾ ಪ್ರಾಂತದಿಂದ ಆಳಿದ ಒಂದು ಅರಸುಮನೆತನ. 1638ರಲ್ಲಿ ರಣದುಲ್ಲಾಖಾನ್ ಶಿರಾವನ್ನು ಗೆಲ್ಲುವುದಕ್ಕೆ ಮುನ್ನ ಅದು ಕರ್ನಾಟಕ-ಬಿಜಾಪುರ-ಬಾಲಾಘಾಟ್ ಪ್ರದೇಶದ ಕೇಂದ್ರವಾಗಿದ್ದಿತು. ದೊಡ್ಡಬಳ್ಳಾಪುರ, ಬೆಂಗಳೂರು, ಹೊಸಕೋಟೆ ಮತ್ತು ಕೋಲಾರ ಜಿಲ್ಲೆಯ ಪ್ರದೇಶಗಳು ಶಿರಾದ ಆಧಿಪತ್ಯಕ್ಕೆ ಒಳಪಟ್ಟಿದ್ದುವು. ರಣದುಲ್ಲಾಖಾನ್ (1638) ಶಿರಾವನ್ನು ವಶಪಡಿಸಿಕೊಂಡು ಅಲ್ಲಿ ಮಲ್ಲಿಕ್ ರಿಹಾನ್‍ನನ್ನು ಫೌಜುದಾರನನ್ನಾಗಿ ನೇಮಿಸಿದ. ಇವನು 1651ರವರೆಗೂ ಅಧಿಕಾರಿಯಾಗಿ ಮುಂದುವರಿದ. ರಣದುಲ್ಲಾಖಾನ್ ಹಿಂದಿರುಗಿದ ಮೇಲೆ ಶಿರಾ ಶಿವಾಜಿಯ ತಂದೆ ಶಹಾಜಿಯ ಜಹಗೀರಾಯಿತು.

	ಬಿಜಾಪುರದ ಸುಲ್ತಾನರ ತರುವಾಯ ಕರ್ನಾಟಕದ ಕೆಲವು ಪ್ರದೇಶಗಳು ಮುಗಲರ ಕೈವಶವಾದವು. 1686ರಲ್ಲಿ ಬಿಜಾಪುರವನ್ನು ಔರಂಗಜೇಬ್ ಆಕ್ರಮಿಸಿಕೊಂಡ. ಮೊಗಲರ ಆಡಳಿತದಲ್ಲಿ ಶಿರಾ ಪ್ರಾಂತ ವನ್ನು ರಚಿಸಲಾಯಿತು. ಈ ಪ್ರಾಂತದಲ್ಲಿ ಬಸವಾಪಟ್ಟಣ, ಬೂದಿಹಾಳು, ಶಿರಾ, ಪೆನುಕೊಂಡೆ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ಕೋಲಾರ-ಈ ಪರಗಣಗಳಿದ್ದವು. ಖಾಸಿಂಖಾನ್ (1687-98) ಅಲ್ಲಿನ ಫೌಜುದಾರನಾದ. ಖಾಸಿಂಖಾನ್ ದಕ್ಷನಾದ ಅಧಿಕಾರಿಯಾಗಿದ್ದ. ಶಿರಾ ಸುಬಾದ ಅಭಿವೃದ್ಧಿಗೋಸ್ಕರ ದುಡಿದ ಈತ ಅದನ್ನು ಮೊಗಲರ ಒಂದು ಪ್ರಮುಖ ಮಿಲಿಟರಿ ನೆಲೆಯನ್ನಾಗಿ ಮಾಡಿದ. ಶಿರಾದಲ್ಲಿ ಕೋಟೆಯೊಂದನ್ನು ನಿರ್ಮಿಸಿದ. ಜಾಮಾ ಮಸೀದಿ ನಿರ್ಮಾಣವಾದದ್ದು ಇವನ ಕಾಲದಲ್ಲೇ. ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿ ಎಂಬ ಸ್ಥಳದಲ್ಲಿ ಮರಾಠರ ಮೇಲೆ ಯುದ್ಧಮಾಡುತ್ತಿದ್ದ ಸಂದರ್ಭದಲ್ಲಿ 1698ರಲ್ಲಿ ಈತ ಮರಣ ಹೊಂದಿದ.

	ಖಾಸಿಂಖಾನನ ಮರಣಾನಂತರ ಜುಲ್ಫಿಕರ್ ಖಾನ್ ಅಧಿಕಾರಕ್ಕೆ ಬಂದ. ಈತ ಮುಗಲರಿಗೆ ಸೇರಿದ್ದ ದಕ್ಷಿಣದ ಪ್ರದೇಶಗಳ ಮೇಲೆಲ್ಲ ಅಧಿಕಾರ ಸ್ಥಾಪಿಸಿದ. ಆರ್ಕಾಟ್ ಈತನ ರಾಜಧಾನಿಯಾಯಿತು. ಅಮೀನ್ ಖಾನ್‍ನನ್ನು ಈತ ಶಿರಾದ ಗವರ್ನರ್ ಆಗಿ ನೇಮಿಸಿದ. ಕರ್ನಾಟಕ-ಬಿಜಾಪುರ-ಬಾಲಾಘಾಟ್ ಪ್ರದೇಶದಲ್ಲಿ ಮುಗಲರ ಪ್ರಾಬಲ್ಯವನ್ನು ಎತ್ತಿಹಿಡಿಯುವುದು ಜುಲ್ಫಿಕರ್ ಖಾನನ ಕೆಲಸವಾಗಿತ್ತು. ಇದರ ಜೊತೆಗೆ ಮುಗಲರ ಸ್ನೇಹ ಬಯಸಿ, ಕಪ್ಪಕಾಣಿಕೆಗಳನ್ನು ಕೊಡಲು ಒಪ್ಪಂದಕ್ಕೆ ಬಂದಿದ್ದ ಪಾಳೆಯಗಾರರಿಂದ ಕಪ್ಪ ವಸೂಲಿ ಮಾಡುವ ಗುರುತರವಾದ ಜವಾಬ್ದಾರಿಯೂ ಇವನ ಮೇಲಿತ್ತು. ವ್ಯಾಪಾರಕ್ಕಾಗಿ ಸೌಲಭ್ಯಗಳನ್ನು ಯಾಚಿಸಲು ಬಂದಿದ್ದ ಐರೋಪ್ಯರಿಂದಲೂ ಈತ ಮುಗಲ ಸರ್ಕಾರಕ್ಕೆ ಹಣವನ್ನು ವಸೂಲಿ ಮಾಡುತ್ತಿದ್ದ.

	ಔರಂಗಜೇಬ್‍ನ ಮರಣಾನಂತರ ಮುಗಲ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು (1707-13). ಕರ್ನಾಟಕದಲ್ಲೂ ಮುಗಲರ ಸ್ಥಾನಮಾನಗಳು ಕುಗ್ಗಿದವು. ಕೆಲವು ಕಾಲ ಅವರು ಅಸಮರ್ಥರಾದರು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಮೈಸೂರಿನ ರಾಜ ಶಿರಾದ ಮೇಲೆ ದಂಡೆತ್ತಿ ಹೋದ. ಮುಗಲ ಸರ್ಕಾರಕ್ಕೆ ತಲುಪಿಸಬೇಕೆಂದು ಇಟ್ಟುಕೊಂಡಿದ್ದ ಕಪ್ಪಕಾಣಿಕೆಯ ಹಣ ಈ ದೊರೆಯ ಕೈವಶವಾಗುವುದರ ಜೊತೆಗೆ ಮೈಸೂರು ರಾಜ್ಯದ ಎಲ್ಲೆಯೂ ವಿಸ್ತಾರಗೊಂಡಿತು. 1700ರಲ್ಲಿ ಜುಲ್ಫಿಕರ್ ಖಾನನ ಸ್ಥಾನದಲ್ಲಿ ದಾವೂದ್ ಖಾನ್‍ನನ್ನು ನೇಮಿಸಲಾಯಿತು. ಈತ ಸ್ವತಂತ್ರ ರಾಜನಂತೆ ಮೆರೆದ.

	1713ರಲ್ಲಿ ಒಂದನೆಯ ಆಸಫ್ ಜಾಹೀ ನಿಜಾಮನಾಗಿ ಮುಗಲರ ಪ್ರದೇಶಗಳ ಮೇಲೆ ಅಧಿಕಾರ ಸ್ಥಾಪಿಸಿದ. ಮುಗಲರ ಆಡಳಿತ ಪ್ರದೇಶಗಳ ಪರಿಸ್ಥಿತಿಯನ್ನು ಕೂಲಂಕಷವಾಗಿ ವಿವೇಚಿಸಿ ಈತ ಎಲ್ಲವನ್ನೂ ತಹಬಂದಿಗೆ ತಂದ. ಆಡಳಿತ ಯಂತ್ರವನ್ನು ಸುಧಾರಿಸಿದ. ದಕ್ಷತೆಯನ್ನು ಹೆಚ್ಚಿಸಿದ. ಸದತ್‍ಖಾನನ ದರ್ಪವನ್ನು ಅಡಗಿಸಿ, ಆತ ಆರ್ಕಾಟ್ ಪ್ರದೇಶಗಳ ಮೇಲೆ ಮಾತ್ರ ಅಧಿಕಾರ ಹೊಂದಿರುವಂತೆ ನಿಗದಿಪಡಿಸಿದ. 1717ರಲ್ಲಿ ಶಿರಾವನ್ನು ಆರ್ಕಾಟ್ ಸರ್ಕಾರದಿಂದ ಬೇರ್ಪಡಿಸಿದ. ಸವಣೂರು, ಕಡಪ ಮತ್ತು ಕರ್ನೂಲ್‍ಗಳಿಗೆ ನವಾಬರನ್ನು ನೇಮಿಸಿದ. 1717ರಲ್ಲಿ ಅಮೀನ್‍ಖಾನ್ ಶಿರಾದ ನವಾಬನಾಗಿ ನೇಮಿಸಲ್ಪಟ್ಟ. ಆತ ನಿಜಾಮನ ನೇರ ನಿಯಂತ್ರಣಕ್ಕೆ ಒಳಪಟ್ಟಿದ್ದ. ಈ ಏರ್ಪಾಡನ್ನು ಒಪ್ಪದ ಸದತುಲ್ಲಾಖಾನ್ ಸವಣೂರು, ಕಡಪ ಮತ್ತು ಕರ್ನೂಲ್‍ಗಳ ನವಾಬರೊ ಡನೆ ರಹಸ್ಯ ಒಪ್ಪಂದವನ್ನು ಮಾಡಿಕೊಂಡು, ಶಿರಾದ ಅಮೀನ್‍ಖಾನನ ಮೇಲೆಬೀಳಲು ಸಮಯ ಕಾದ. ಮೈಸೂರಿನ ರಾಜ ಶಿರಾದೊಡನೆ ಸೇರಿಕೊಳ್ಳುವಂತೆ ಚಿತಾವಣೆ ಮಾಡಿ ನಿಜಾಮ ತನ್ನತ್ತ ಒಲಿಯುವಂತೆ ಮಾಡಿದ. 1724ರಲ್ಲಿ ನಡೆದ ಯುದ್ಧದಲ್ಲಿ ಅಮೀನ್‍ಖಾನ್ ಸೋತು ಹೋದ. ಮೈಸೂರಿನ ಸೈನ್ಯ ಹಿಮ್ಮೆಟ್ಟಿತು. ಅಬ್ದುಲ್ ನಾಬಿ ತಾಹಿರ್‍ಖಾನ್ ಶಿರಾದ ನವಾಬನಾಗಿ ನೇಮಕಗೊಂಡ.

	ತಾಹಿರ್‍ಖಾನ್ (1724-42) ಆರ್ಕಾಟ್ ನವಾಬನಾಗಿದ್ದ ಸದತುಲ್ಲಾಖಾ ನನ ಹಿತೈಷಿಯಾಗಿದ್ದ. ಇದರಿಂದಾಗಿ ಮೈಸೂರಿನತ್ತ ನುಗ್ಗಲು ಒಳ್ಳೆಯ ಅವಕಾಶ ದೊರೆಯಿತು. 1725ರಲ್ಲಿ ಸವಣೂರು, ಕಡಪ, ಕರ್ನೂಲುಗಳ ನವಾಬರು ಮೈಸೂರಿನ ವಿರುದ್ಧ ಒಕ್ಕೂಟವನ್ನು ರಚಿಸಿದರು. ಇಕ್ಕೇರಿ, ಸುತ್ತಿ ಮತ್ತು ಶಿರಾದ ಪಾಳೆಯಗಾರರು ಈ ಒಕ್ಕೂಟಕ್ಕೆ ಬೆಂಬಲ ನೀಡಿದರು. ನಿಜಾಮನ ಆಶೀರ್ವಾದವೂ ಈ ಒಕ್ಕೂಟಕ್ಕೆ ದೊರೆಯಿತು. ತಾಹಿರ್‍ಖಾನ್ ಶ್ರೀರಂಗಪಟ್ಟಣದ ಮುತ್ತಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ. ರಾಜನ ಅಧಿಕಾರಿಗಳು ಒಪ್ಪಂದಕ್ಕೆ ಬಂದು, ಕಪ್ಪಕಾಣಿಕೆ ಕೊಡಲು ತೀರ್ಮಾನಿಸಿದರು. ಸದತುಲ್ಲಾಖಾನ್ ಬದುಕಿರುವವರೆಗೂ ತಾಹಿರ್‍ಖಾನ್ ಅವನಿಗೆ ನಿಷ್ಠೆಯಿಂದ ನಡೆದುಕೊಂಡ.

	1742ರಲ್ಲಿ ದಿಲಾವರ್ ಖಾನ್ (1742-56) ಶಿರಾದ ನವಾಬನಾದ. ಈತ ಶಿರಾದ ನವಾಬರಲ್ಲೇ ಅತ್ಯಂತ ಸಮರ್ಥನೆಂದು ಪ್ರಖ್ಯಾತನಾಗಿದ್ದಾನೆ. ಈತನ ಕಾಲದಲ್ಲಿ ರಾಜಕೀಯ ಶಾಂತಿ, ಆರ್ಥಿಕ ಪ್ರಗತಿ ಮತ್ತು ಸಾಂಸ್ಕøತಿಕ ಬೆಳೆವಣಿಗೆಗಳುಂಟಾದವು. ಶಿರಾದ ಖ್ಯಾತಿಗೆ ತನ್ನೆಲ್ಲ ಶಕ್ತಿ ಮತ್ತು ಐಶ್ವರ್ಯಗಳನ್ನು ಈತ ದಾರೆಯೆರೆದ. ಟಿಪ್ಪುಸುಲ್ತಾನ್ ಶಿರಾದಿಂದ 12,000 ಕುಟುಂಬಗಳನ್ನು ಷಾಹಿರ್-ಗಂಜಾಂಗೆ ಕರೆಸಿ ಅವರಿಗೆ ಸೌಕರ್ಯಗಳನ್ನು ಕಲ್ಪಿಸಿಕೊಟ್ಟನೆಂದರೆ ಶಿರಾ ನಗರ ಅಂದಿನ ಸಾಮಾಜಿಕ-ಆರ್ಥಿಕ ಕ್ಷೇತ್ರದಲ್ಲಿ ಎಷ್ಟು ಮುಂದುವರಿದಿತ್ತೆಂಬುದು ಗೊತ್ತಾಗುತ್ತದೆ.

	ಹೈದರ್ ಮತ್ತು ಟಿಪ್ಪುಸುಲ್ತಾನರು ಬೆಂಗಳೂರು ಮತ್ತು ಶ್ರೀರಂಗ ಪಟ್ಟಣಗಳಲ್ಲಿ ಕಟ್ಟಿದ್ದ ಅರಮನೆಗಳು ದಿಲಾವರ್‍ಖಾನ್ ಶಿರಾದಲ್ಲಿ ಕಟ್ಟಿಸಿದ ಅರಮನೆಯ ಮಾದರಿಯಲ್ಲಿದ್ದವು. ಶಿರಾದ ಕೋಟೆ ಬೆಂಗಳೂರಿನ ಕೋಟೆಗೆ ಮಾದರಿಯಾಯಿತು. 1696ರಲ್ಲಿ ರುಸ್ತುಂಜಂಗ್ ಎಂಬಾತ ಇದನ್ನು ನಿರ್ಮಿಸಿದ. ಷೇಕ್ ಫರೀದ್ ಅದೇ ವರ್ಷ ಬೃಹತ್ ಮಸೀದಿಯನ್ನು ಕಟ್ಟಿಸಿದ. ಇವೆಲ್ಲ ಶಿರಾದ ಗತಕಾಲದ ವೈಭವವನ್ನು ನೆನಪಿಗೆ ತಂದುಕೊಡುವ ಸ್ಮಾರಕಗಳಾಗಿವೆ.

	1756ರವರೆಗೆ ದಿಲಾವರ್‍ಖಾನನು ಶಿರಾದ ನವಾಬನಾಗಿ ಆಳಿಕೆ ನಡೆಸಿದ. 1757ರಲ್ಲಿ ಮರಾಠರು ಶಿರಾವನ್ನು ಆಕ್ರಮಿಸಿಕೊಂಡರು. 1761ರಲ್ಲಿ ಹೈದರ್ ಶಿರಾವನ್ನು ಗೆದ್ದ ಅನಂತರ ಶಿರಾ ಮೈಸೂರು ರಾಜ್ಯಕ್ಕೆ ಸೇರಿಹೋಯಿತು. ಬಸಲತ್ ಜಂಗನು ಹೈದರನಿಗೆ ಶಿರಾದ ನವಾಬನೆಂದು ಬಿರುದನ್ನು ನೀಡಿದ.	
	
				(ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ